Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಲೆನಾಡ ಮಡಿಲಲ್ಲಿ ಮರ್ಡರ್ ಮಿಸ್ಟ್ರಿ``ಶಾಖಾಹಾರಿ`` --ರೇಟಿಂಗ್ : 3.5/5 ****
Posted date: 18 Sun, Feb 2024 09:48:48 AM
ಇತ್ತೀಚೆಗೆ ರಂಗಾಯಣ ರಘು ತುಂಬಾ ಪ್ರಬುದ್ದ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಂಥಾದ್ದೇ  ಮತ್ತೊಂದು ಚಿತ್ರ ಶಾಖಾಹಾರಿ. ಮಲೆನಾಡಿನಲ್ಲಿ ಅನುಮಾನಾಸ್ಪದ ವಾಗಿ ನಡೆಯುವ ಕೊಲೆಗಳ ಸುತ್ತ ನಡೆಯುವ  ಥ್ರಿಲ್ಲರ್ ಕಥಾನಕವನ್ನು ಈ ಚಿತ್ರದಲ್ಲಿ ಹೇಳಲಾಗಿದೆ.  ಮಲೆನಾಡಿನ ಸುಂದರ ಪರಿಸರ, ಅಲ್ಲೊಂದು ಪುಟ್ಟ  ಊರು, ಆ ಊರಲ್ಲಿ  ಸುಬ್ರಹ್ಮಣ್ಯ(ರಂಗಾಯಣ ರಘು) ಭಟ್ಟರ  ದುರ್ಗಾಪ್ರಸಾದ್ ಶಾಖಾಹಾರಿ ಹೋಟೆಲ್  ಬಲು ಫೇಮಸ್,  ಅಲ್ಲಿ ಸಿಗೋ  ಊಟ, ತಿಂಡಿಗೆ ಮನ ಸೋಲದವರೇ ಇಲ್ಲ ಎನ್ನಬಹುದು.  ಆ ಊರಲ್ಲೊಂದು ಪೊಲೀಸ್ ಠಾಣೆ. ಅಲ್ಲಿ  ಕೊಲೆಯ  ಕೇಸೊಂದು ದಾಖಲಾಗುತ್ತದೆ, ಆದರೆ ಠಾಣೆಯ  ಪೋಲಿಸ್ ಅಧಿಕಾರಿ (ಗೋಪಾಲಕೃಷ್ಣ ದೇಶಪಾಂಡೆ)  ಹೆಂಡತಿಯ ಅನಾರೋಗ್ಯದ ಕಾರಣ  ತನ್ನೂರಿಗೆ ವರ್ಗಾವಣೆ ಕೋರಿರುತ್ತಾನೆ.  ಹಿರಿಯ ಅಧಿಕಾರಿಗಳ ಆಗ್ರಹದಿಂದ  ಈ ಕೇಸ್ ತನಿಖೆ ಮುಗಿಸಿಕೊಂಡು ಹೋಗಲು ನಿರ್ಧರಿಸುತ್ತಾನೆ.
 
ಈ ನಡುವೆ ಸೆಲ್‌ನಲ್ಲಿದ್ದ ವಿಜಯ್(ವಿನಯ್ ಜರಿಮಲಿ)  ಜೈಲಿಂದ ಪರಾರಿಯಾಗಲು ಯತ್ನಿಸಿ  ಪೊಲೀಸರಿಂದ ಗುಂಡೇಟು ತಿನ್ನುತ್ತಾನೆ. ಕಾಡಲ್ಲಿ ಕಣ್ಮರೆಯಾದ  ವಿಜಯ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಾರೆ,  ವಿಜಯ್  ಪ್ರಾಣ ರಕ್ಷಣೆಗಾಗಿ ಸುಬ್ಬಣ್ಣನ ಹೋಟೆಲ್ ನಲ್ಲಿ ಆಶ್ರಯ ಪಡೆಯುತ್ತಾನೆ.  
 
ವಿಜಯ್‌ ತಾನು ಮಾಡದ ಕೊಲೆಯ ಆರೋಪ ಹೊತ್ತು  ಜೈಲಲ್ಲಿರುತ್ತಾನೆ.  ಈತನ ಪತ್ನಿ ಸೌಗಂಧಿಕಾ (ನಿಧಿ ಹೆಗಡೆ), ಈಕೆಯ ನಡವಳಿಕೆ ಸರಿ ಇಲ್ಲದ ವಿಚಾರ ತಿಳಿದ ವಿಜಯ್, ಈ ಬಗ್ಗೆ ಹೆಂಡತಿಯ ಬಳಿ ವಿಚಾರಿಸುತ್ತಾನೆ. ಕೊನೆಗೂ ಆಕೆ ಸತ್ಯ ಒಪ್ಪಿಕೊಳ್ಳಬೇಕಾಗುತ್ತದೆ. ಇದರಿಂದ ಬೇಸರಗೊಂಡ ವಿಜಯ್ ಮದ್ಯಪಾನ‌ ಮಾಡಿಕೊಂಡು  ಮನೆಗೆ ಬರುತ್ತಾನೆ. ಅದರ ಮರುದಿನವೇ ಸೌಗಂಧಿಕಾಳ  ಕೊಲೆಯಾಗಿರುತ್ತೆ, ಆಕೆಯ ಕೊಲೆ ಮಾಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಂತೆ  ಅನೇಕ  ಸತ್ಯಗಳು ಬಿಚ್ಚಿಕೊಳ್ಳುತ್ತ ಹೋಗುತ್ತದೆ.  
 
ಈ  ನಡುವೆ ಹೋಟೆಲ್‌ಗೆ  ಗ್ರಾಹಕರು, ತನಿಖೆಗಾಗಿ ಬರುವ ಪೊಲೀಸರ ಸಂಖ್ಯೆ ಜಾಸ್ತಿಯಾಗುತ್ತೆ. ಇದರ ಹೊರತಾಗಿ  ಈ ಎಲ್ಲ ಬೆಳವಣಿಗೆಗಳನ್ನು  ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಸುಬ್ಬಣ್ಣ,  ಸಮಯ ನೋಡಿ ವಿಜಯ್ ನನ್ನು ಬೆಂಗಳೂರಿಗೆ ಕಳಿಸಲು ಮುಂದಾಗುತ್ತಾನೆ.
 
ಆದರೆ ವಿಧಿಯ ಆಟವೇಚ ಬೇರೆಯಾಗಿರುತ್ತೆ, ವಿಜಯ್  ಆ ಶಾಖಾಹಾರಿ ಹೋಟೆಲ್‌ನಲ್ಲೇ ಸತ್ತು ಹೋಗುತ್ತಾನೆ. ಮುಂದೆ ಸುಬ್ಬಣ್ಣನ ಬದುಕಿನಲ್ಲಿ ಎಲ್ಲವೂ ಆಯೋಮಯವಾಗಿ ಹಲವು ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ಹೀಗೆ ಚಿತ್ರಕಥೆ ಕುತೂಹಲಕರ ಘಟ್ಟ ತಲುಪುತ್ತದೆ.  ಇಲ್ಲಿ ಇಡೀ ಚಿತ್ರವನ್ನು ರಂಗಾಯಣ ರಘು ಅವರೇ ಆವರಿಸಿಕೊಂಡಿದ್ದಾರೆಂದರೆ  ತಪ್ಪಾಗಲಾರದು.  ಹೋಟೆಲಿಗೆ ಬರುವ ಗ್ರಾಹಕರು, ತನಿಖೆಗೆ ಬರುವ ಪೊಲೀಸ್ ಅಧಿಕಾರಿಗಳು, ಸಹಾಯ ಬೇಡಿಬಂದ ಯುವಕನನ್ನು ಆತ  ರಕ್ಷಿಸುವ ಪರಿ ಹಾಗೂ ತನ್ನದಲ್ಲದ ತಪ್ಪಿಗೆ ಪರದಾಡುವ ವ್ಯಕ್ತಿಯಾಗಿ ಮನೋಜ್ಞ ಅಭಿನಯ ನೀಡಿದ್ದಾರೆ. ಈ  ಮೂಲಕ ಮತ್ತೊಮ್ಮೆ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ.  ಅವರಷ್ಟೇ ಅದ್ಭುತವಾಗಿ ನಟಿಸಿರುವುದು ಮತ್ತೊಬ್ಬ ರಂಗಭೂಮಿ ಕಲಾವಿದ ಗೋಪಾಲಕೃಷ್ಣ ದೇಶಪಾಂಡೆ. 
 
ವಿನಯ್ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಿಸಿಕೊಂಡಿದ್ದಾರೆ,  ನಾಯಕಿ ನಿಧಿ ಹೆಗಡೆ, ಶ್ರೀಹರ್ಷ, ಸುಜಯ್ ಶಾಸ್ತ್ರಿ,  ಪ್ರತಿಮಾ ನಾಯಕ್ ಸೇರಿ ಎಲ್ಲ ಕಲಾವಿದರೂ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಸ್ನೇಹ, ಪ್ರೀತಿಗೆ, ಮೋಸ ಮಾಡಿದವರಿಗೆ  ತಕ್ಕಶಾಸ್ತಿ  ಇದ್ದೇ ಇರುತ್ತದೆ ಎಂಬುದನ್ನು ಬಹಳ ಸೂಕ್ಷ್ಮ ಕಥೆಯ ಮೂಲಕ  ಹೇಳಿರುವ  ನಿರ್ದೇಶಕರ ಪರಿ ಗಮನ ಸೆಳೆಯುತ್ತದೆ. ಹಿನ್ನೆಲೆ  ಸಂಗೀತವೂ ಚಿತ್ರಕಥೆಗೆ ಪೂರಕವಾಗಿದೆ. ಜೊತೆಗೆ ಛಾಯಾಗ್ರಾಹಕರ ಕೈಚಳಕದಲ್ಲಿ ಬಂದಿರುವ ಮಲೆನಾಡಿನ ಸೌಂದರ್ಯವನ್ನೂ  ಸವಿಯಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಲೆನಾಡ ಮಡಿಲಲ್ಲಿ ಮರ್ಡರ್ ಮಿಸ್ಟ್ರಿ``ಶಾಖಾಹಾರಿ`` --ರೇಟಿಂಗ್ : 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.